ರಾಸಲೀಲೆ  -
ವೃಂದಾವನದ ಗೋಪಿಯರು ಕೃಷ್ಣನೊಂದಿಗೆ ಆಷಾಢ ಮಾಸದ ಪೂರ್ಣಿಮೆಯ ರಾತ್ರಿಯ ಬೆಳದಿಂಗಳಿನಲ್ಲಿ ಯಮುನಾ ತೀರದಲ್ಲಿ ಆಡಿದ ಶೃಂಗಾರ ನ್ಯತ್ಯ. ಇದನ್ನು ರಾಸಕ್ರೀಡೆ ಎಂದೂ ಕರೆಯಲಾಗುತ್ತದೆ. ಆ ರಾತ್ರಿ ಕೃಷ್ಣನ ಕೊಳಲಿನ ಧ್ವನಿಕೇಳಿದ ಗೋಪಿಕೆ ಯರು ತಾವು ಮಾಡುತ್ತಿದ್ದ ಕೆಲಸಗಳನ್ನು ಅಲ್ಲಲ್ಲಿಗೆ ಬಿಟ್ಟು ಯಮುನಾ ತೀರಕ್ಕೆ ಬರುತ್ತಾರೆ. ಬೆಳದಿಂಗಳ ರಾತ್ರಿಯಲ್ಲಿ ಕೃಷ್ಣನ ಸಂಗ ಬಯ ಸುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದ ಗೋಪಿಕೆಯರನ್ನು ಕೃಷ್ಣ ಛೇಡಿಸಿ, ಅಪಹಾಸ್ಯ ಮಾಡುತ್ತಾನೆ. ಆಗ ಗೋಪಿಯರು ತಾವು ಕೃಷ್ಣನಲ್ಲಿಟ್ಟಿರುವ ಪ್ರೇಮವನ್ನೂ ಆ ಬಗ್ಗೆ ತಮಗಿರುವ ಕಾತರವನ್ನೂ ವಿವರಿಸಿ ಹೇಳಿ ತಮ್ಮ ಕರ್ತವ್ಯಲೋಪವನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ಕಾತರತೆಯನ್ನು ಉದ್ದೀಪಿಸಿ ಕೃಷ್ಣ ಇದ್ದಕ್ಕಿದ್ದಂತೆ ಕಣ್ಮರೆಯಾ ಗುತ್ತಾನೆ. ಇದರಿಂದ ನೊಂದ ಗೋಪಿಕೆಯರು ವಿರಹದಿಂದ ಪ್ರಲಾಪಿಸುತ್ತಾರೆ. ಆ ಪ್ರಲಾಪವು ಗೋಪೀ ಗೀತ ಎಂದು ಪ್ರಸಿದ್ಧವಾಗಿದೆ. ಗೋಪಿಕೆಯರ ವಿರಹಪ್ರಲಾಪವನ್ನು ಕೇಳಿ ಪ್ರಸನ್ನನಾದ ಕೃಷ್ಣ ಪ್ರತ್ಯಕ್ಷವಾಗಿ ಅವರನ್ನು ರಮಿಸುತ್ತ ರಾಸಕ್ರೀಡೆಯಲ್ಲಿ ತೊಡಗುವನು. ಒಬ್ಬೊಬ್ಬ ಗೋಪಿಕೆಯೊಡನೆ ಒಬ್ಬೊಬ್ಬ ಕೃಷ್ಣನಾಗಿ ಅವರೆಲ್ಲರನ್ನೂ ಆಲಿಂಗಿಸುವನು. ಹೀಗೆ ಬಹಳ ಹೊತ್ತಿನತನಕ ಕೃಷ್ಣನೊಡನೆ ಶೃಂಗಾರ ನರ್ತನಗೈದ ಗೋಪಿಕೆಯರು ಬಳಲುವರು. ಅವರ ಶ್ರಮಪರಿಹಾರಮಾಡಬೇಕೆಂದು ತಿಳಿದ ಕೃಷ್ಣ ಅವರೊಂದಿಗೆ ಯಮುನಾ ನದಿಯ ಮಡುವಿನಲ್ಲಿಳಿದು, ಜಲಕ್ರೀಡೆಗೆ ಆಸೆಪಟ್ಟವನಂತೆ ನಟಿಸುತ್ತ ಅವರನ್ನು ಅತ್ಯುತ್ಸಾಹದಲ್ಲಿ ಮುಳುಗಿಸುತ್ತಾನೆ. ಹೀಗೆ ವಿವಿಧ ರೀತಿಯಲ್ಲಿ ಕೃಷ್ಣ  ಗೋಪಿಯರೊಂದಿಗೆ ಆ ರಾತ್ರಿ ಕಳೆದ. ಈ ಮಧುರಭಾವ ಭಕ್ತಿಯ ಪರಾಕಾಷ್ಠೆ ಎಂದು ಭಕ್ತಿಗ್ರಂಥಗಳು ಹೇಳುತ್ತವೆ. ಸಖ್ಯ, ದಾಸ್ಯ, ವಾತ್ಸಲ್ಯ, ಶಾಂತ-ಈ ಭಕ್ತಿ ಭಾವಗಳಿಗಿಂತ ಮಧುರ ಭಾವವೇ ಪರಿಪೂರ್ಣವಾದದ್ದು. ಇದು ಅಲೌಕಿಕ ಭಾವ. ಲೋಕದ ಸ್ತ್ರೀ ಪುರುಷರ ಕಾಮಪ್ರೇರಿತ ಸಮಾಗಮಕ್ಕೂ ಇದಕ್ಕೂ ಸಂಬಂಧವಿಲ್ಲ. ಕೃಷ್ಣ ಪರಮಪುರುಷ, ಯೋಗೀಶ್ವರ ಎಂದು ಭಾವಿಸುವ ಗೋಪಿಯರು ಆತನ ಸೌಂದರ್ಯ, ವೇಷಭೂಷಣ, ಚೇತೋಹಾರಿಯಾದ ವೇಣುಗಾನಗಳಿಂದ ಆಕರ್ಷಿತರಾಗಿ ಆತನ ಸಾನ್ನಿಧ್ಯವನ್ನು ಬಯಸುವುದು ಸ್ವಾಭಾವಿಕವಾಗಿದೆ.

ರಾಸಲೀಲೆಯ ವಿವರಣೆ ಭಾಗವತ ದಶಮಸ್ಕಂಧದ 33ನೆಯ ಅಧ್ಯಾಯದಲ್ಲಿ ಬಂದಿದೆ. ಇದರ ಪೂರ್ವ ವೃತ್ತಾಂತ 29ನೆಯ ಅಧ್ಯಾಯದಲ್ಲಿ ಆರಂಭವಾಗುತ್ತದೆ. ಶುಕಮಹರ್ಷಿ ಹೇಳುತ್ತಿದ್ದ ರಾಸಕ್ರೀಡೆ ಭಾಗವನ್ನು ಕೇಳಿದ ಪರೀಕ್ಷಿತರಾಜ ಶಂಕಿತನಾಗಿ ಕೃಷ್ಣನ ಈ ರಾಸಲೀಲೆ ಎಷ್ಟು ಉಚಿತವೆಂದು ಪ್ರಶ್ನಿಸಿದಾಗ, ಮಹರ್ಷಿಗಳು ಕೃಷ್ಣನ ಸರ್ವವ್ಯಾಪಿ ವ್ಯಕ್ತಿತ್ವವನ್ನು ವಿವರಿಸುವರು. ಭಗವಂತನಾದ ಕೃಷ್ಣ ಪೂರ್ಣಕಾಮನಾದುದರಿಂದ, ಅವನು ನಡೆಸಿದ ಈ ಕಾರ್ಯ ಕಾಮತೃಪ್ತಿಗಾಗಿ ಮಾಡಿದುದಲ್ಲ; ಸುಖಾಪೇಕ್ಷೆಯಿಂದ ನಡೆಸಿದಾಗ ಮಾತ್ರ ಯಾವುದೇ ಕಾರ್ಯ ದೋಷಯುಕ್ತವಾಗುತ್ತದೆ. ಭಗವಂತನು ಭಕ್ತರನ್ನು ಅನುಗ್ರಹಿಸುವುದಕ್ಕಾಗಿಯೇ ಮನುಷ್ಯ ದೇಹ ಧರಿಸಿ, ತನ್ನ ಭಕ್ತರನ್ನು ಯಾವ ವಿಧದಿಂದ ಸಂತೋಷಪಡಿಸಿದರೆ ಅವರ ಮನಸ್ಸು ತನ್ನಲ್ಲಿ ನಾಟುವುದೋ ಅದಕ್ಕೆ ತಕ್ಕಂತೆಯೇ ಅವರವರ ಮನಸ್ಸನ್ನಾಕರ್ಷಿಸುವನು. ಈ ಕಾರಣ ದಿಂದಲೇ ಕೃಷ್ಣನೊಂದಿಗೆ ಗೋಪಿಯರು ರಾಸಲೀಲೆಯಲ್ಲಿ ತೊಡಗಿದ್ದರೂ ಅವರ ಗಂಡಂದಿರಿಗೆ ತಮ್ಮ ತಮ್ಮ ಮನೆಯಲ್ಲಿ ತಮ್ಮ ಪಕ್ಕದಲ್ಲಿಯೇ ಮಲಗಿದ್ದಂತೆ ಭಾಸವಾಗುತ್ತದೆ. 	
(ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ